Tuesday, July 13, 2010

Wanted! 'Rao', But only alive!!

ನಮ್ಮ ನಡುವೆ ಬಹಳ ರೀತಿಯ 'ರಾವ್' ಗಳಿದ್ದರು, ಇದ್ದಾರೆ ಮತ್ತು ಇರುತ್ತಾರೆ. ಆದರೆ ಅವರಲ್ಲಿ ಕೆಲವರೇ ಅತ್ಯುನ್ನತ ಕೆಲಸಕ್ಕಾಗಿ ಹೆಸರು ಮತ್ತು ಜೀವನ ಸಾರ್ಥಕಗೊಳಿಸಿಕೊಂಡಿರುವರು. ಹೀಗೆ ಹೇಳುತ್ತಲ್ಲೇ ಮನಸ್ಸು 'ಪ್ರೊಫೆಸ್ಸರ್||ಸಿ.ಎನ್.ಆರ್. ರಾವ್' ಅವರನ್ನು ಕಲ್ಪಿಸಿಕೊಂಡು ಬಿಡುತ್ತದೆ. ಆದರೆ ನಾನು ಹೇಳುತ್ತಿರುವ 'ರಾವ್', ಹೆಸರಿನಲ್ಲಿ ಸಾಮ್ಯತೆ ಹೊಂದಿದ್ದರೂ, ತಮ್ಮ ಕೆಲಸದಿಂದ ಮತ್ತು ಪ್ರಸಿದ್ದಿಯಲ್ಲಿ ಪ್ರೊ.ಸಿ.ಎನ್.ಆರ್.ಆರ್ ಗಿಂತ ಬಿನ್ನ. ನನ್ನ ರಾವ್ ಒಬ್ಬ ಪ್ರಸಿದ್ದ "ಕಪ್ಪೆ ರಾವ್", ಹೆಸರು ಪ್ರೊ.ಸಿ.ಆರ್.ಎನ್.ರಾವ್ (ಹೆಸರಿನ ವ್ಯತ್ಯಾಸ ಗಮನಿಸಿ). ನಮಗೀಗ ಇಂತಹ 'ರಾವ್'ಗಳು ಬೇಕಾಗಿದ್ದರೆ, ಅದೂ ಜೀವಂತವಾಗಿ!!

ಸಿ.ಆರ್. ನಾರಾಯಣ ರಾವ್, ಚಿತ್ರ ಸಹಾಯ: ಕರೆಂಟ್ ಸೈನ್ಸ್, 2007

ಜಾಗತಿಕ ಮಟ್ಟದಲ್ಲಿ ಕಪ್ಪೆಗಳ ಸಂತತಿ ನಾಶಹೊಂದುತ್ತಿರುವ ಸಂಧರ್ಭದಲ್ಲಿ, ಇತ್ತೀಚಿಗೆ ನಮ್ಮದೇಶದ ಪಶ್ಚಿಮ ಘಟ್ಟಗಳಿಂದ ನ್ಯಾನೂ ಕಪ್ಪೆಯ ಪ್ರವರ್ಗ ಮತ್ತು ಪ್ರಭೇದವನ್ನು ಗುರುತಿಸಲಾಗಿದೆ. ಈ ಹೊಸಕಪ್ಪೆಯ ಹೆಸರು 'ಅದ್ದೂರಿ ಪೊದೆಗಪ್ಪೆ' (Resplendent shrubfrog). ಅಪರೂಪದ ಈ ಕಪ್ಪೆಯ ಪರಿಶೋಧನೆಯು ದೆಹಲಿ ವಿಶ್ವವಿದ್ಯಾನಿಲಯದ ಡಾ| ಸತ್ಯಭಾಮ ದಾಸ್ ಬಿಜು, ಪೂನೆ ವಿಶ್ವವಿದ್ಯಾನಿಲಯದ ಡಾ| ಯೋಗೇಶ್ ಶೌಚೆ, ಉತ್ತರ ಒರಿಸ್ಸಾ ವಿಶ್ವವಿದ್ಯಾನಿಲಯದ ಡಾ| ಸುಶಿಲ್ ಕೆ ದತ್ತ, ಫ್ರಾನ್ಸೆ ದೇಶದ ರಾಷ್ಟೀಯ ಪ್ರಾಕೃತಿಕ ಪ್ರಾಚ್ಯ ವಸ್ತುಸಂಗ್ರಹಾಲಯದ ಡಾ| ಅಲೈನ್ ದೂಬ್ವ ಮತ್ತು ಬೆಲ್ಜಿಯಂ ದೇಶದ ಉಚಿತ ವಿಶ್ವವಿದ್ಯಾನಿಲಯದ ಡಾ| ಫ್ರಾಂಕಿ ಬೋಸ್ಸ್ಯುತ್, ಇವರುಗಳ ಪರಿಶ್ರಮದ ಫಲವಾಗಿದೆ. Current Science ಎಂಬ ವೈಜ್ಞಾನಿಕ ಪತ್ರಿಕೆಯಲ್ಲಿ ಈ ಕಪ್ಪೆಯ ಸವಿವರ ಪ್ರಕಟಗೊಂಡಿದೆ (25 ಏಪ್ರಿಲ್ ೨೦೧೦). ಸರಿ, 'ಕಪ್ಪೆ ರಾವ್'ಗೂ ಹೊಸ ಪ್ರಭೆದಕ್ಕೂ ಏನು ಸಂಬಂಧ ಅಂತೀರಾ? ಮುಂದೆ ಓದಿ.

ಈ ಪರಿಶೋಧನೆಯಿಂದ ಕಪ್ಪೆಗಳ ಹೊಸತೊಂದು ಪ್ರವರ್ಗವೂ ಬೆಳಕಿಗೆ ಬಂದಿದೆ. ಈ ಪ್ರಭೇದಕ್ಕೆ 'ರಾವೋರ್ಚೆಸ್ಟೆಸ್' (Raorchestes) ಎಂದು ನಾಮಕರಣ ಮಾಡಲಾಗಿದೆ. ಇಲ್ಲಿನ 'ರಾವ್' ಪದವನ್ನು, ನಾನು ಮೇಲೆ ಹೇಳಿದ ಕಪ್ಪೆ 'ರಾವ್' ಹೆಸರಿನಿಂದ ತೆಗೆದು ಕೊಂಡಿದ್ದಾರೆ.

Raorchestes resplendens. ಚಿತ್ರ ಸಹಾಯ: ಡಾ| ಎಸ್.ಡಿ. ಬಿಜು

ನಮ್ಮ ಈ ಕಪ್ಪೆ ರಾವ್, ಕರ್ನಾಟಕದ ಹೆಸರಾಂತ 'ಕಪ್ಪೆವಿಜ್ಞಾನಿ'ಯಾದ ಸಿ.ಆರ್. ನಾರಾಯಣ ರಾವ್ (೧೮೮೨-೧೯೬೦). ಅವರ ಕಪ್ಪೆಗಳ ಮೇಲಿನ ವೈಜ್ಞಾನಿಕ ಸೇವೆಯ ಸ್ಮರಣಾರ್ಥ, ಈ ಕಪ್ಪೆಗಳ ಪ್ರವರ್ಗಕ್ಕೆ ಅವರ ಹೆಸರನ್ನು ನೀಡಲಾಗಿದೆ. ೧೫ನೇ ಆಗಸ್ಟ್ ೧೮೮೨ರಲ್ಲಿ ಕೊಯಮತ್ತೂರಿನಲ್ಲಿ ಜನಿಸಿದ ರಾವ್, ಬಳ್ಳಾರಿ ಮತ್ತು ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದರು. ಕೊಯಮತ್ತೂರು ಮತ್ತು ಎರ್ನಾಕುಲಂನಲ್ಲಿ ಪ್ರಾಧ್ಯಾಪಕರಾಗಿದ್ದರು. ೧೯೩೭ರಲ್ಲಿ ಸೇವೆಯಿಂದ ನಿವೃತ್ತರಾದ ಅವರು ಸೆಂಟ್ರಲ್ ಕಾಲೇಜ್ನಲ್ಲಿ ಪ್ರಾಣಿಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಆ ವೇಳೆಗಾಗಲೇ ರಾವ್ ಅವರು ೧೮ ಕಪ್ಪೆಗಳ ಪ್ರಭೇಧಗಳನ್ನು ಪಶ್ಚಿಮ ಘಟ್ಟಗಳಿಂದ ಹುಡುಕಿದ್ದರು. ಇನ್ನೊಂದು ವಿಶೇಷದ ಸಂಗತಿ ಎಂದರೆ, ರಾವ್ ಅವರು ಪ್ರಸ್ತುತ ಈ ಹೊಸ ಕಪ್ಪೆಗಳ ಪ್ರವರ್ಗ ಮತ್ತು ಪ್ರಭೇಧಗಳನ್ನು ಪ್ರಕಟಿಸಿದ 'Current Science' ವೈಜ್ಞಾನಿಕ ಪತ್ರಿಕೆಯ ಪ್ರಪ್ರಥಮ ಸಂಪಾದಕರು (೧೯೩೨) . ಪೊದೆಗಪ್ಪೆಗಳಿಗೆ ೧೮೩೮ರಲ್ಲಿ ಸುಡಿ (Tschudi) ನೀಡಿದ್ದ ವೈಜ್ಞಾನಿಕ ಪ್ರವರ್ಗದ ಹೆಸರು ಆರ್ಚೆಸ್ಟೆಸ್ (Orchestes) ಎಂದು, ಇದನ್ನೇ ಪುನಃ 'ರಾವ್' ಹೆಸರಿನ್ನೊಂದಿಗೆ ಕೂಡಿಸಿ 'ರಾವೋರ್ಚೆಸ್ಟೆಸ್' ಎಂದು ಕರೆಯಲಾಗಿದೆ.

ಕಡೆಯದಾಗಿ, 'ನಮ್ಮ ಕಪ್ಪೆ ರಾವ್' ಮತ್ತು ಈ ಅದ್ದೂರಿ ಕಪ್ಪೆಗಳು ನಮಗೆ ಹೆಮ್ಮೆಯ ವಿಚಾರವೇ, ಆದರೂ ಚಿಂತಿಸಬೇಕಾಗಿರುವ ವಿಷಯ ಒಂದಿದೆ. ಏಕೆಂದರೆ ಈ ಕಪ್ಪೆಗಳು ಪ್ರಪಂಚದಲ್ಲಿ ಬೇರೆಲ್ಲೂ ದೊರಕದು, ಅವುಗಳ ಸಂತತಿ ಉಳಿಯಬೇಕಾದರೆ 'ಅನೈಮುಡಿ'ಯಂತಹ ಪರ್ವತಶ್ರೇಣಿಗಳ ಉಳಿವು ಅತ್ಯಗತ್ಯ. ಪಶ್ಚಿಮ ಘಟ್ಟಗಳು ಇಂತಹ ಅನೇಕಾನೇಕ ಕಪ್ಪೆಗಳಿಗೆ ನೈಸರ್ಗಿಕ ಮನೆಯಾಗಿದೆ. ವಿದ್ಯುತ್ ಯೋಜನೆಗಳು, ಅರಣ್ಯ ವತ್ತುವರಿ, ಅಕ್ರಮ ಗಣಿಗಾರಿಕೆಗಳಿಂದ ಪಶ್ಚಿಮ ಘಟ್ಟಗಳನ್ನು ಉಳಿಸದಿದ್ದರೆ, ಇನ್ನೂ ಬಹಳಷ್ಟು ಕಪ್ಪೆಗಳು ವೈಜ್ಞಾನಿಕವಾಗಿ ಬೆಳಕಿಗೆ ಬರುವ ಮುನ್ನವೇ ನಾಶವಾದೀತು. ನಮ್ಮ ಪಶ್ಚಿಮ ಘಟ್ಟಗಳ ಕಪ್ಪೆಗಳ ಉಳಿವಿಗಾಗಿ, ಇನ್ನಷ್ಟು 'ಕಪ್ಪೆ ರಾವ್' ಗಳು ಬೇಕಾಗಿದ್ದಾರೆ!