Saturday, May 1, 2010

ಕಪ್ಪೆ ಉಳಿಸೋಣ ಬನ್ನಿ!

ಇದೇನಪ್ಪ, ಮೂವತ್ತರಲ್ಲೇ ಈ ಮಾಣಿಗೆ ಮಂಡೆ ಕೆಟ್ಟುಹೊಯ್ತಾ? ಅಂತ ತಿಳ್ಕೊಬೇಡಿ. ನಾನು ಹೇಳ್ತಾ ಇರೋವಿಷ್ಯ ಸ್ವಲ್ಪ ಗಂಭೀರವಾದದ್ದೆ. ನಾವೆಲ್ಲ ಸೇರಿ ಯೋಚ್ನೆ ಮಾಡ್ಬೇಕಾಗಿರೋದೆ ಆಗಿದೆ. ನಿಮ್ಮನ್ನೆಲ್ಲ ನಾನು ಸುಮಾರು ೧೦ ರಿಂದ ೨೦ ವರ್ಷಗಳಷ್ಟು ಹಿಂದಕ್ಕೆ ಕರ್ಕೊಂಡು ಹೋಗ್ತಾ ಇದ್ದೀನಿ! ಹೆದ್ರ ಬೇಡಿ!! ನಾನೇನೂ ಹಿಪ್ನಾಟಿಸಂ ಮಾಡ್ತಾ ಇಲ್ಲ. ಆಮೇಲೆ ನಾನೇ ನಿಮ್ಮನ್ನ ಈಚೆ ಕರ್ಕೊಂಡು ಬರ್ತೀನಿ, ಆಗ್ಬೌದ? ಆದ್ರೆ ಒಂದು ಮಾತು, ನನ್ನ ಜೊತೆ ಬರ್ತಾ, ಬರೀ ನಿಮ್ಮ ಕಣ್ಣು, ಕಿವಿ, ಮೂಗು ಮಾತ್ರ ತೆಕ್ಕೊಂದಿರ್ಲಿ, ಬಾಯಿಗೆ ಬೀಗ! ಒಹ್! ಏನಂದ್ರಿ? ಅದು ಸ್ವಲ್ಪ ಕಷ್ಟ ಅಂತೀರಾ!! ಹಾಗಾದ್ರೆ ಕಷ್ಟ ಆಗೋರು ಇಲ್ಲೇ ಇರಿ, ಉಳ್ದೊರು ನನ್ನ ಜೊತೆ ಬನ್ನಿ. ನಾನು ಯಾಕೆ ಹಾಗೆ ಹೇಳ್ದೆ ಅಂದ್ರೆ, ನಿಮ್ಮನ್ನ ಕರ್ಕೊಂಡು ಹೋಗ್ತಾ ಇರೋದು ರಾತ್ರಿ ಹೊತ್ತು, ನಮ್ಮಿಂದಾಗಿ ಕಾಡು ಪ್ರಾಣಿಗಳಿಗೆ ತೊಂದರೆ ಆಗೋದು ಬೇಡಾ ಅಂತ. ಅಸ್ಟೇ ಅಲ್ಲ, ನಾನು ನಿಮಗೆ ತೋರ್ಸೋಕ್ಕೆ ಹೊರಟಿರೋ ನನ್ನ ಸ್ನೇಹಿತರು ನಮ್ಕಿಂತ ಸ್ವಲ್ಪ ಭಿನ್ನ! ಅಂದ್ರೆ, ನಮ್ಮಂಗೆ ಇನ್ನೊಬ್ರು ಮಾತು ಆಡ್ತಾ ಇದ್ದಾಗ ಬಾಯಿ ತೂರ್ಸೋದಿಲ್ಲ, ಬದಲಿಗೆ ನಮ್ಮ ಮಾತು ಕೇಳಿದ್ರೆ ಅವ್ರೆ ಬಾಯಿ ಮುಚಿಕೊಂಡ್ಬಿಡ್ತಾರೆ. ಸರಿ ಇನ್ನೇನು ತಡ ಮಾಡೋದು ಬೇಡ, ಹೊರಡೋಣ.

ನಾವೆಲ್ಲ ಈಗ ಊರಾಚೆ ಇರೋ ಕೆರೆ ಹತ್ರ ಬರ್ತಾ ಇದ್ದಿವಿ, ಹಾಂ! ಕೇಳಿ, ಕಿವಿಗೊಟ್ಟು ಕೇಳಿ, ಎಂತ ಸಂಗೀತ! ಕೇಳಸ್ತಾ ಇದ್ಯಾ!! ಕೆರೆ ಹತ್ರನೇ ಹೋಗೋಣ, ಇನ್ನೂ ಚೆನ್ನಾಗಿ ಕೇಳ್ಬೌದು! ಬನ್ನಿ, ಬನ್ನಿ, ಹೀಗೆ ಬನ್ನಿ!! ನಾನೂ ಮೆಲು ದನಿಯಲ್ಲೇ ಮಾತಾಡ್ತೀನಿ! ವಾಹ್! ಅದ್ಬುತ ಗಾಯನ. ನಾನು ನನ್ನ 'torch' ಹಾಕಿ, ಒಬ್ಬೊಬ್ಬರನ್ನೇ ತೋರ್ಸ್ತೀನಿ!

ಅವ್ರೂ, ಆ ಹಳ್ದಿ ಬಣ್ಣದೊರು, ಅವ್ರ ದ್ವನಿ ಕೇಳಿದ್ರ, ಎಂತಃ ಶಾರೀರ! ಕಂಠ ಮತ್ತು ದ್ವನಿ ಚೀಲ ಎರಡೂ ತಾಮ್ರ ವರ್ಣ! ಅವರು ನಮ್ ದೇಶದ ಅತೀ ದೊಡ್ಡ ಗಾಯಕರು! ಇಲ್ಲಿ ನೋಡಿ! ನಿಮ್ಮ ಕಾಲ ಬುಡದಲ್ಲೇ ಇನ್ನೊಬ್ರು ಹಾಡ್ತಾ ಇದ್ದಾರೆ, ಮೂರ್ತಿ ಚಿಕ್ಕದಾದ್ರೂ ಕೀರ್ತಿ ದೊಡ್ಡದೂ ಅಂತಾರಲ್ಲಾ ಹಾಗೆ ಇದೇ ನೋಡಿ ಇವರ ಗಾಯನ ಶೈಲಿ! ಬೆನ್ನ ಮೇಲೆ ಚಿನ್ನದ ಸರಗಳನ್ನ ಹಾಕಿರೋ ಹಾಗಿದೆ ನೋಡಿ. ಜೀವನವಿಡೀ ಉಚ್ಛ ಸ್ತಾಯಿಯಲ್ಲೇ ಹಾಡ್ತಾರೆ. ಇವರ ತಮ್ಮ, ನೋಡೋಕ್ಕೆ ಇವರ ಹಾಗೆ ಇದ್ರೂ, ಕೆಂಪು ಬಣ್ಣ ಜಾಸ್ತಿ. ಹಾಡದೆ ಇದ್ದಾಗ ಇಬ್ರನ್ನೋ ಒಟ್ಟಿಗೆ ನೋಡಿದ್ರೆ, ಅವಳಿ ಜವಳಿ ಅನ್ನಬೇಕು, ಹಾಗಿದ್ದಾರೆ. ಕೆರೆ ನೀರಿನ ಮೇಲೆ ನೋಡಿ, ಅಲ್ಲೊಬ್ರು ನೀರಲ್ಲಿ ಯೋಗಾಸನ ಮಾಡ್ತಾ ಹಾಡ್ತಾ ಇದ್ದಾರೆ! ನೋಡಿದ್ರಾ? ತಾಳಿ, ಅವರು ನಮ್ಮ 'torch' ಬೆಳಕಿಗೆ ಓಡಿ ಹೋಗ್ಬೌದು! ಮಂದವಾಗಿ ಅವ್ರ ಮೇಲೆ ಬೆಳಕು ಹಾಕ್ತೀನಿ!! ನೋಡಿ, ನೋಡಿ, ಬೇಗ ನೋಡಿ!! ಇವರು ಬೇರೆ ಸಮಯದಲ್ಲಿ, ನೀರಿನ ಮೇಲೆ ಓಡಿ ಹೋಗ್ತಾರೆ. ಏನು? ಅರ್ಥ ಆಗ್ಲಿಲ್ಲ ಅಂದ್ರಾ! ನಿಮಗೆ ನೆನಪಿದ್ಯಾ, ನಾವೆಲ್ಲ ಶಾಲೆಗೇ ಹೋಗ್ತಾ, ನೀರ್ ಮೇಲೆ ಕಲ್ಲು ಚಿಮ್ಮುಸ್ತಾ ಇದ್ವಿ! ಇವರೂ ಆ ಕಲ್ಲಿನ ಹಾಗೆ ನೀರಿನ ಮೇಲೆ ಚಿಮ್ತಾ ಹೋಗ್ತಾರೆ!! ಇವ್ರಿಗೆ ಯೋಗ ಶಕ್ತಿ ಎಷ್ಟಿದೆ ಅಂದ್ರೆ, ನಿರ್ನಲ್ಲಿ ಮುಳ್ಗಿಕೊಂಡೆ ಒಂದೇ ಜಾಗದಲ್ಲಿ ಬಹಳ ಹೊತ್ತು ಇರ್ತಾರೆ. ನಂಗೆ ಇನ್ನೂ ಒಂದು ವಿಚಾರ ನೆನಪಿಗೆ ಬರ್ತಾ ಇದೆ, ಹಾಂ! ವೇದದಲ್ಲಿ ಕೂಡ ಇವರೆಲ್ಲರ ಹಾಡು, ವಿಚಾರ, ಮೈಬಣ್ಣ ಗಳ ಬಗ್ಗೆ ಬರ್ದಿದೆಯಂತೆ!! ವಾಹ್, ನಿಜವಾಗಲೂ ನನಗಂತೂ ಇವೆಲ್ಲ ಗಂಧರ್ವ ಗಾಯನವೇ ಸರಿ. ಇವ್ರನೆಲ್ಲ ನೋಡ್ತಾ, ಇವರ ಹಾಡನ್ನ ಕೇಳ್ತಾ ಇದ್ರೆ, ಸಮಯ ಹೋಗಿದ್ದೆ ಗೊತ್ತಾಗೊಲ್ಲ ಬಿಡಿ. ಬನ್ನಿ, ಹೆಚ್ಚು ಕಮ್ಮಿ, ಇಡಿ ರಾತ್ರಿ ಇವರ ಗಾಯನ ಗೊಸ್ಟಿ ಇರುತ್ತೆ, ವಾಪಸ್ಸು ಹೊರಡೋಣ. ತುಟಿಪಿಟಕ್ಕೆನ್ನದೆ ನನ್ನ ಜೊತೆ ಬಂದಿದಕ್ಕೆ ಧನ್ಯವಾದಗಳು!



ಈಗ ಅದೇ ಕೆರೆಗೆ, ವರ್ತಮಾನದಲ್ಲಿ ಹೋಗೋಣ! ಬರ್ತಿರ! ಖಂಡಿತ, ನಂಗೊತ್ತು, ನೀವೆಲ್ಲ ಬರ್ತಿರ ಅಂತ. ಅವತ್ತಿನ ಸಂಗೀತನೇ ನಿಮನ್ನೆಲ್ಲಾ ಮತ್ತೆ ಆ ಕಡೆಗೆ ಎಳಿತಾ ಇದೆ. ಬನ್ನಿ ಹೋಗೋಣ! ಯೋಚ್ನೆ ಮಾಡಬೇಡಿ, ರಾತ್ರಿ ಊಟದ ಹೊತ್ತಿಗೆ ವಾಪಸ್ಸು ಬರೋಣ.

ಅರ್ಧ ಗಂಟೆ ಆಯ್ತಲ್ವ ನಾವೆಲ್ಲಾ ಈ ಕೆರೆಗೆ ಬಂದು! ಏನಾಗಿದೆ? ಅವತ್ತು ಅಷ್ಟು ದೂರದಿಂದಲೇ ಕೇಳಸ್ತಾ ಇದ್ದ ಸಂಗೀತ, ಇವತ್ತು ಕೆರೆ ಮೇಲೆ ನಿಂತರೂ ಕೇಳ್ತಾ ಇಲ್ವಲ್ಲಾ? ಕೆರೆ ಕೂಡ ಕಾಣಸ್ತ ಇದೆ, 'torch'ನ ಅವಶ್ಯಕತೆಯೇ ಇಲ್ಲ! ಅಷ್ಟೊಂದು ನಗರದ ಬೆಳಕು!! ಅರೆ ಇದೇನಿದು, ಕೆರೆನಲ್ಲಿ ನೀರು ಕಮ್ಮಿ ಆಗಿದೆ. ಕೆರೆ ಅಂಚಿಗೆ ಬಹು ಮಹಡಿ ಕಟ್ಟಡಗಳು!! ಬಸ್ಸು, ಕಾರು, ಲಾರಿ ಶಬ್ದಗಳೇ ಜಾಸ್ತಿ ಆಗಿದೆ? ಯಾರೂ ಹಾಡ್ತಾ ಇಲ್ವಲ್ಲಾ? ಏನಾಯ್ತು? ಅಯ್ಯೋ, ಇಲ್ಲಿ ನೋಡಿ! ಅವತ್ತು ಆ ಹಳ್ದಿ ಬಣ್ಣದೊರು, ದೇಶದ ಅತೀ ದೊಡ್ಡ ಗಾಯಕರು ಅಂದಿದ್ರಲ್ಲ, ಅವ್ರ ಮೈಯೆಲ್ಲಾ ಹುಣ್ಣಾಗಿದೆ! ಹೌದು, ಹೌದು. ಇವರೂ ಗಟ್ಟಿ ಇರೋದ್ರಿಂದ ತಡಕೊಂಡಿದ್ದಾರೆ! ಉಳಿದವರು ಜಾಗನೇ ಖಾಲಿ ಮಾಡಿದ್ದರೆ ನೋಡಿ!! ನನಗಂತೂ ನೋಡೋಕ್ಕೆ ಆಗ್ತಾ ಇಲ್ಲ! ಬನ್ನಿ ವಾಪಸ್ಸು ಹೊರಡೋಣ.

ನೋಡಿದ್ರಲ್ಲ, ಏನಾಯ್ತು ಅಂತ? ನನ್ ಜೊತೆ ಬಂದೋರಿಗೆ ಗೊತ್ತಿದೆ, ನಾನು ಯಾರ ಬಗ್ಗೆ ಹೇಳ್ತಾ ಇದ್ದೀನಿ ಅಂತ. ನಿಮಗೂ ಕುತೊಹಲನಾ. ಹೌದುರಿ, ಕಪ್ಪೆಗಳು, ನಮ್ ಕಪ್ಪೆಗಳು, ಎಲ್ಲಿ ಹೋದ್ವು ರೀ, ನಮ್ ಕಪ್ಪೆಗಳು. ಅವತ್ತು ನಾನೇ ಹೇಳಿದ್ದೆ, ನನ್ ಜೊತೆ ಬರೋವಾಗ ಬಾಯಿಗೆ ಬೀಗ ಅಂತ, ಇವತ್ತು ನಾನು ಹೇಳ್ತಾ ಇದ್ದೀನಿ, ಬನ್ನಿ ಎಲ್ಲ ಸೇರಿ ಈ ಅನಾಹುತದ ಬಗ್ಗೆ ಚರ್ಚೆ ಮಾಡೋಣ, ಬರಿ ಅಷ್ಟೇ ಅಲ್ಲ, ನಮಗೆ ಈ ಜಗತ್ತಲ್ಲಿ ಬದ್ಕೊಕೆ ಎಷ್ಟು ಹಕ್ಕು ಇದ್ಯೋ, ಅಸ್ಟೇ ಹಕ್ಕು ಕಪ್ಪೆಗಳಿಗೂ ಇದೆ. ಇನ್ನಾದರೂ ತಡ ಮಾಡದೇ ಕಪ್ಪೆ ಉಳಿಸೋಣ ಬನ್ನಿ!!

2 comments:

Amith said...

Please post a translated version as well, for Kannada illiterate people like me.

Guruprasad Timmapur said...

Sir,
Lekhana adbhutavaagide!!

bari 10-12 varshagaLalli eshtondu badalaagi bittide.. badalaavaNeya vEga nijakkoo gaabhari huttisuttide..

-Guru