Saturday, April 3, 2010
ಕಪ್ಪೆಗಳು ಭೂಕಂಪದ ಮುನ್ಸೂಚನೆ ನೀಡಬಲ್ಲವು!
ನಾವೆಲ್ಲರೂ ಹೊಸತಾಗಿ ಆರಂಭಗೊಂಡ ನಮ್ಮದೇ ಆದ 'CiSTUP Coffee Tea Club' ನಲ್ಲಿ ಟೀ ಹೀರುತ್ತಾ, ಮುಂದೆ ಆಯೋಜಿಸಿಕೊಂಡಿರುವ ಪ್ರವಾಸದ ಬಗ್ಗೆ ಹರಟುತ್ತಿದೆವು. ನಮ್ಮ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕರಾದ ಪ್ರೊ. ಸೀತಾರಾಮ್ ಕೂಡ ನಮ್ಮೊಂದಿಗೆ ಟೀ ಹೀರಲು ಅಲ್ಲಿಗೆ ಬಂದರು. ಬಂದವರೇ, "ಗುರುರಾಜ್, ಇವತ್ತಿನ 'ನ್ಯೂಸ್ ಪೇಪರ್' ನೋಡಿದ್ರ?" ಎಂದು ತಮ್ಮ ನಾಗಲೋಟದ ಮಾತಿನ ಧಾಟಿಯಲ್ಲಿ ನನ್ನನ್ನು ಕೇಳಿದರು. ನೆನಪಿಡಿ ಯಾರೇ ನಿಮಗೆ ಈ ಪ್ರಶ್ನೆ ಕೇಳಲಿ, ಅದರ ಅರ್ಥ ಅವರೇನೋ 'ಹೇಳಬೇಕೆಂದಿದ್ದಾರೆ' ಎಂದು. ಸ್ವಲ್ಪ ಸುಳ್ಳೇ ಅದರೂ (ಪೇಪರ್ ಓದಿದ್ದು ಸತ್ಯ), 'ಇಲ್ಲ ಹೇಳಿ ಸರ್' ಎಂದೆ. 'ನಾಲ್ಕನೇಯ ಅಥವಾ ಐದನೇಯ ಪುಟದಲ್ಲಿ "ಕಪ್ಪೆಗಳು ಭೂಕಂಪದ ಮುನ್ಸೂಚನೆ ನೀಡಬಲ್ಲವು" ಅಂತ ಬಂದಿದೆ, ಓದಿದ್ರ? ಅಂದ್ರು. 'ಹೌದೆ?! ಖಂಡಿತ ಓದಿಲ್ಲ ಸರ್' ಎಂದೆ. 'ನನಗೆ ಭೂಕಂಪ ನೆಚ್ಚಿನ ವಿಷಯ, ನಿಮಗೆ ಕಪ್ಪೆಗಳು ನೆಚ್ಚಿನ ವಿಷಯ, ಸ್ವಲ್ಪ ನೋಡಿ ಹೇಳಿ' ಅಂದ್ರು.
ಮುಂದಿನ ಐದು ನಿಮಿಷಗಳಲ್ಲಿ ನಮ್ಮ ಗ್ರಂಥಾಲಯದಲ್ಲಿ 'Times of India' ದಿನ ಪತ್ರಿಕೆ ಹುಡುಕಿದೆ. ಹೌದು, ಅವರು ಹೇಳಿದಂತೆ, ಕಪ್ಪೆಗಳು ಭೂಕಂಪನದ ಮುನ್ಸೂಚನೆಯನ್ನು ಕರಾರುವಕ್ಕಾಗಿ ಹೇಳುತ್ತವೆ ಎಂದು ಬರೆಯಲಾಗಿತ್ತು. ಈ ಮಾಹಿತಿಯ ಆಧಾರ ಹುಡುಕಿದೆ. ಕೆಲವೇ ನಿಮಿಷಗಳಲ್ಲಿ ನನಗೆ ಈ ವಿಷಯದ ವೈಜ್ಞಾನಿಕ ಲೇಖನ ಸಿಕ್ಕಿತು.
ಇದೇ ಮಾರ್ಚ್ ೩೧ ರಂದು 'ಜರ್ನಲ್ ಆಫ್ ಜೂಲೋಜಿ' ಎಂಬ ವೈಜ್ಞಾನಿಕ ನಿಯತಕಾಲಿಕೆಯಲ್ಲಿ, ಇಂಗ್ಲೆಂಡ್ ದೇಶದ ವಿಜ್ಞಾನಿಗಳಾದ ಡಾ. ರಾಚೆಲ್ ಎ. ಗ್ರಾಂಟ್ ಮತ್ತು ಪ್ರೊ. ಟಿಮ್ ಹಾಲಿಡೆ, ಅತ್ಯಂತ ಕೂತೂಹಲವಾದ ವೈಜ್ಞಾನಿಕ ಸಂಶೋದನೆಯನ್ನು ಪ್ರಕಟಿಸಿದ್ದರು. ಈ ವಿಜ್ಞಾನಿಗಳು ಇಟಲಿ ದೇಶದ ಲಾ ಕ್ವಿಲಾ ಪ್ರಾಂತ್ಯದಲ್ಲಿ ನಡೆಸಿದ ಸಂಶೋದನೆಯಿಂದ, 'ಕಪ್ಪೆಗಳು ಭೂಕಂಪದ ಮುನ್ಸೂಚನೆ ನೀಡಬಲ್ಲವು' ಎಂಬ ಅಂಶವನ್ನು ಬೆಳಕಿಗೆ ತಂದಿದ್ದರು. ಭೂಕಂಪ ಸಂಭವಿಸುವ ೫ ದಿನಗಳಷ್ಟು ಮೊದಲೇ, ಹೇರಳ ಸಂಖ್ಯೆಯಲ್ಲಿದ್ದ ಗಂಡು ಕಪ್ಪೆಗಳು (common toad, Bufo bufo ಎಂಬ ಪ್ರಭೇದ) ಭೂಕಂಪ ಕೇಂದ್ರ ಬಿಂದುವಿನಿಂದ (ಎಪಿ ಸೆಂಟರ್ ನಿಂದ) ಕಣ್ಮರೆಯಾಗತೊಡಗಿದವು. ಭೂಕಂಪದ ದಿನಗಳಲ್ಲಿ ಒಂದೂ ಗಂಡು ಕಪ್ಪೆ ಆ ಸ್ಥಳದಲ್ಲಿ ಸಿಗಲಿಲ್ಲ. ಭೂಕಂಪದ ತರುವಾಯ ಎರಡು-ಮೂರು ದಿನಗಳಲ್ಲಿ ಗಂದುಕಪ್ಪೆಗಳು ಅಷ್ಟೇ ಸಂಖ್ಯೆಯಲ್ಲಿ ಪುನಃ ಕಾಣಿಸಿಕೊಂಡವು. ವಾತಾವರಣದಲ್ಲಿ ಇರುವ ಆಯಾನೋಸ್ಪೆರ್ (ionosphere) ಪದರವು, ಭೂಕಂಪದಿಂದ ಹೊರಡುವ ಅತೀ ಕೆಳಮಟ್ಟದ ತರಂಗಗಳಿಂದ ಬದಲಾವಣೆ ಹೊಂದುತ್ತದೆ. ಈ ಬದಲಾವಣೆ ಭೂಕಂಪ ಸಂಭವಿಸುವ ಮೊದಲ ವಾರದಲ್ಲಿಯೇ ತಿಳಿಯುತ್ತದೆ. ವಿಜ್ಞಾನಿಗಳು ಈ ರೀತಿ ಆಯಾನೋಸ್ಪೆರ್ನಲ್ಲಿ ಆದ ಬದಲಾವಣೆ ಮತ್ತು ಕಪ್ಪೆಗಳ ಸಂಖ್ಯೆಯ ಇಳಿಮುಖದಲ್ಲಿ ಇರುವ ಸಂಭಂದವನ್ನು ಗಣನೆಗೆ ತೆಗೆದುಕೊಂಡು, ಕಪ್ಪೆಗಳು ಭೂಕಂಪದ ಮುನ್ಸೂಚನೆ ನೀಡುತ್ತವೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಸಸ್ತನಿಗಳಲ್ಲಿ, ಪಕ್ಷಿಗಳಲ್ಲಿ, ಇರುವೆಗಳಲ್ಲಿ, ಇಲಿಗಳಲ್ಲಿ ಮತ್ತು ಸಾಕು ಪ್ರಾಣಿಗಳಾದ ನಾಯಿ, ದನ, ಬೆಕ್ಕು ಮತ್ತು ಕೋಳಿಗಳಲ್ಲಿ ಭೂಕಂಪದ ಸೂಚನೆಗಳು ಕಂಡಿದ್ದರೂ, ಅವುಗಳು ಬಗ್ಗೆ ವೈಜ್ಞಾನಿಕವಾಗಿ ಸಂಶೋದನೆ ನಡೆದಿರಲಿಲ್ಲ. ಪ್ರಸ್ತುತ ಸಂಶೋದನೆ ಪ್ರಾಯಶಃ ವೈಜ್ಞಾನಿಕ ಜಗತಿನಲ್ಲಿ ಮೊದಲನೆಯದು ಮತ್ತು ಭೂಕಂಪದ ಮುನ್ಸೂಚನೆಯಲ್ಲಿ ಕಪ್ಪೆಗಳ ಪಾತ್ರದ ಬಗ್ಗೆ ನಡೆದ ಏಕೈಕ ಸಂಶೋದನೆ ಆಗಿದೆ. ಜಾಗತಿಕ ಮಟ್ಟದಲ್ಲಿ ಕಪ್ಪೆಗಳು (ಉಭಯ ಜೀವಿಗಳು) ನಶಿಸುತ್ತಿರುವ ಸಂದರ್ಭದಲ್ಲಿ, ಕಪ್ಪೆಗಳ ಅರಿವಿಗೆ ಈ ರೀತಿಯ ಸಂಶೋದನೆಗಳು ಅತೀ ಮುಖ್ಯ. ಇದೇ ಏಪ್ರಿಲ್ ೩೦, 'Save the Frog Day'! ಬನ್ನಿ ಕಪ್ಪೆಗಳ ಬಗ್ಗೆ ಇನ್ನೂ ತಿಳಿಯೋಣ, ಅವುಗಳ ಪರಿಸರ ಉಳಿಸೋಣ!!
ಆಧಾರ: Grant, R.A and T. Halliday, 2010. Predicting the unpredictable; evidence of pre-seismic anticipatory behaviour in the common toad. Journal of Zoology (2010), 1-9.
Subscribe to:
Posts (Atom)